ಅನ್‌ಲಾಕ್ ಬಳಿಕ ಆರ್ಥಿಕತೆ ಸುಧಾರಣೆ – ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ

ನವದೆಹಲಿ : ಲಾಕ್‌ಡೌನ್‌ನಿಂದ ಹಳಿ ತಪ್ಪಿದ್ದ ಆರ್ಥಿಕ‌ ವ್ಯವಸ್ಥೆ ಅನ್‌ಲಾಕ್‌ ಬಳಿಕ ಮತ್ತೆ ಉತ್ತಮ ಪರಿಸ್ಥಿತಿಗೆ ವಾಪಸಾಗುತ್ತಿದೆ. ಕೇಂದ್ರ ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು 90,918 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದೆ.

ಲಾಕ್‌ಡೌನ್‌ ಪರಿಣಾಮದಿಂದ ಏಪ್ರಿಲ್ ನಲ್ಲಿ 32,294 ಕೋಟಿ ರೂ. ಹಾಗೂ ಮೇ ತಿಂಗಳಿನಲ್ಲಿ 62,009 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು ಆದರೆ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದ್ದು ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹ ಗಣನೀಯವಾಗಿ ಸುಧಾರಿಸಿದೆ.

ಕೇಂದ್ರದ ಜಿಎಸ್‌ಟಿ 18,980 ಕೋಟಿ ರೂ., ರಾಜ್ಯದ ಜಿಎಸ್‌ಟಿ 23,970 ಕೋಟಿ ರೂ., ಹಾಗೂ ಆಮದು ವಸ್ತುಗಳ ಮೇಲಿನ ಜಿಎಸ್‌ಟಿ 15,709 ಕೋಟಿ ರೂ., ಒಳಗೊಂಡಂತೆ ಐಜಿಎಸ್‌ಟಿ 40,302 ಕೋಟಿ ರೂ., 7,655 ಕೋಟಿ ರೂ. ಸೆಸ್ ಸಂಗ್ರಹ ಸೇರಿ ಜೂನ್ ತಿಂಗಳಲ್ಲಿ 90,918 ಕೋಟಿ ರೂ. ಜಿಎಸ್‌ಟಿ  ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಐಜಿಎಸ್‌ಟಿಯಿಂದ ಸಂಗ್ರವಾದ ತೆರಿಗೆಯಲ್ಲಿ 11, 117 ಕೋಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಲಿದೆ. ಒಟ್ಟು ಜೂನ್ ತಿಂಗಳ ಒಟ್ಟು ವ್ಯವಹಾರದ ಬಳಿಕ ಕೇಂದ್ರ 32,305 ಕೋಟಿ ರೂ. ಹಾಗೂ ರಾಜ್ಯಗಳು 35,087 ಕೋಟಿ ರೂ. ಪಾಲು ಹೊಂದಿವೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಮದುನಿಂದ ಬರುವ ಆದಾಯ ಪ್ರಮಾಣದಲ್ಲಿ ಶೇ.29 ಹಾಗೂ ದೇಶಿಯ ವಹಿವಾಟಿನ ಆದಾಯ ಶೇ. 3ರಷ್ಟು ಕುಸಿದಿದೆ. ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಸಮಯಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್, ಮಾರ್ಚ್ ಮತ್ತು ಫೆಬ್ರವರಿ ಕೆಲವು ರಿಟರ್ನ್ಸ್ ಜುಲೈನಲ್ಲಿ ಪಾವತಿಯಾಗುವ ಸಾಧ್ಯತೆಗಳಿದೆ.

ಏಪ್ರಿಲ್ ತಿಂಗಳಿನ ಜಿಎಸ್ಟಿ ಸಂಗ್ರಹವು 32,294 ಕೋಟಿ ರೂ. ಆಗಿದ್ದು, ಇದು ಕಳೆದ ವರ್ಷದ ಅವಧಿಯಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇ.72 ಕಡಿಮೆಯಾಗಿದೆ. ಮೇ ತಿಂಗಳಿನ ಜಿಎಸ್ಟಿ ಸಂಗ್ರಹ 62,009 ಕೋಟಿ ರೂ. ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ 38% ಕಡಿಮೆಯಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಕರ್ನಾಟಕದಲ್ಲಿ 2019ರ ಜೂನ್‌ 6,659 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷದ ಜೂನ್‌ನಲ್ಲಿ ಶೇ.1 ರಷ್ಟು ಹೆಚ್ಚಳವಾಗಿದ್ದು, 6,710 ಕೋಟಿ ರೂ. ಸಂಗ್ರಹವಾಗಿದೆ.

Comments

Leave a Reply

Your email address will not be published. Required fields are marked *