ಅನಿಶಾ ಪ್ರಕರಣ ಸಿಐಡಿಗೆ ಒಪ್ಪಿಸಿ- ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ ತಾಯಿ

ಉಡುಪಿ: ಅನಿಶಾ ಪೂಜಾರಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಹೈ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆ ಎಂಬಿಎ ಪದವೀಧರೆ ಅನಿಶಾ ಸಾವು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಎಂದು ಮೃತ ಯುವತಿ ತಾಯಿ ಹೈ ಕೋರ್ಟಿಗೆ ರಿಟ್ ಸಲ್ಲಿಸಿದ್ದಾರೆ.

ಕಾಜ್ರಳ್ಳಿ ನಿವಾಸಿ ಅನಿಶಾ ಪೂಜಾರಿಯ ಅಸಹಜ ಸಾವಿನ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಆರೋಪಿ ಚೇತನ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅನಿಶಾ ಪೂಜಾರಿಯ ಸಾವಿಗೆ ಸಂಬಂಧಿಸಿದಂತೆ ದೊರಕಿರುವ ಸಾಕ್ಷ್ಯ ಮತ್ತು ದೃಶ್ಯ ಚಿತ್ರದಿಂದ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕುಟುಂಬಸ್ಥರು ಭಾವಿಸಿದ್ದರು.

ಇದೀಗ ಅನಿಶಾ ಪೂಜಾರಿ ಸಾವಿನ ಕುರಿತು ಬಹಳಷ್ಟು ಸಂಶಯ ಮೂಡಿ ಬಂದಿರುವುದರಿಂದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ಹೀಗಾಗಿ ಹೈ ಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?
ಪ್ರೀತಿಯ ಪಾಶಕ್ಕೆ ತಲೆಯೊಡ್ಡಿ ಎಂಬಿಎ ಪದವೀಧರೆ ಅನಿಶಾ ಪ್ರಾಣ ಕಳೆದುಕೊಂಡಿದ್ದರು. ಸಾವಿಗೂ ಮುನ್ನ ಗೆಳೆಯ ಚೇತನ್ ಮೇಲೆ ಆರೋಪ ಹೊರಿಸಿ ನಾಲ್ಕು ಪುಟ ಡೆತ್ ನೋಟ್ ಬರೆಯಲಾಗಿತ್ತು. ಅನಿಶಾ ಮತ್ತು ಚೇತನ್ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಮನೆಗಳಲ್ಲಿ ರಾದ್ಧಾಂತ ಆಗಿ ಮದುವೆ ಸಾಧ್ಯವಿಲ್ಲ ಎಂದಾಗ ಅನಿಶಾ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅನಿಶಾ ಸಾವಿನ ತನಿಖೆ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬವಾದ್ರೂ ಸಾಲ ಮಾಡಿ ಅನಿಶಾಳಿಗೆ ಎಂಬಿಎ ಓದಿಸಲಾಗಿತ್ತು. ಶಿಕ್ಷಣ, ಬೆಂಗಳೂರು ಖಾಸಗಿ ಕಂಪನಿ ಉದ್ಯೋಗದಲ್ಲಿ ಇದ್ದಾಗ ಈಕೆಯ ಸಾಧನೆಗಳಿಗೆ ಮನೆಯಲ್ಲಿರುವ ಮೆಡಲ್ ಗಳೇ ಸಾಕ್ಷಿ. ವಯೋ ಸಹಜ ಪ್ರೀತಿ ಒಂದೇ ಊರಿನ ಇಬ್ಬರಲ್ಲಿ ಮೊಳಕೆಯೊಡೆದಿತ್ತು. ಇಬ್ಬರೂ ಊರೂರು ಸುತ್ತಿ ಪ್ರೀತಿಕಡಲಲ್ಲಿ ತೇಲಿದ್ದಾರೆ. ಆದ್ರೆ ಅನಿಶಾ ಪೂಜಾರಿ ಪರಿಪರಿಯಾಗಿ ಬೇಡಿದರೂ ಚೇತನ್ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಆತ ಕಡೆಗಣಿಸಿದ್ದಾನೆ.

ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದಾನೆ ಎಂದು ತಿಳಿದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಳು. ಚೇತನ್ ಗೆ ಸಂಬಂಧಪಟ್ಟ ಹಾಡಿಯಲ್ಲಿ ಅನಿಶಾ ನೇಣಿಗೆ ಶರಣಾಗಿದ್ದಳು. ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಳು. ತನ್ನ ಫೇಸ್ಬುಕ್ ನಲ್ಲಿ ಚೇತನ್ ಒಬ್ಬ ಗಲ್ರ್ಸ್ ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಳು.

ಎಂಬಿಎ ಉತ್ತೀರ್ಣಳಾಗಿದ್ದ ಅನಿಶಾ ಪೂಜಾರಿ ಪ್ರೀತಿ ವಿಚಾರದಲ್ಲಿ ಸೋತಿದ್ದಳು. ಪ್ರಾಣ ಅರ್ಪಣೆ ಮಾಡಿದ್ದಳು. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಚೇತನ್ ಶೆಟ್ಟಿಗೆ ಶಿಕ್ಷೆಯಾಗಬೇಕು ಎಂದು ಆಕೆಯ ಕುಟುಂಬ ಕಣ್ಣೀರಿಡುತ್ತಿದೆ. ಇದೀಗ ತನಿಖೆ ವಿಳಂಬ ಹಿನ್ನೆಲೆ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಕುಟುಂಬಸ್ಥರು ರಿಟ್ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *