-ಅನಿವಾಸಿ ಕನ್ನಡಿಗರ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದೆ ಬರಲಿ
ಬೆಂಗಳೂರು: ಅನಿವಾಸಿ ಕನ್ನಡಿಗರ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಮತ್ತು ಕಳೆದ ಮೂರು ವರ್ಷಗಳಿಂದ ಖಾಲಿ ಇರುವ ಅನಿವಾಸಿ ಭಾರತೀಯ ಸಮಿತಿಗೆ ಕನ್ನಡಿಗರನ್ನ ನೇಮಿಸಬೇಕೆಂದು ದುಬೈನಲ್ಲಿರುವ ಕನ್ನಡಿಗರು ಒತ್ತಾಯಿಸಿದ್ದಾರೆ. ಅನಿವಾಸಿ ಭಾರತೀಯ ಸಮಿತಿಗೆ ಓರ್ವ ಕನ್ನಡಿಗ ಸದಸ್ಯರನ್ನ ನೇಮಿಸಿದ್ರೆ, ಕೆಲಸ ಅರಸಿ ವಿದೇಶದಲ್ಲಿರುವ ಕನ್ನಡಿಗರಿಗೆ ಸಹಾಯವಾಗಲಿದೆ ಎಂದು ಎನ್‍ಆರ್‍ಐಗಳು ರಾಜ್ಯ ಸರ್ಕಾರಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಸಲ್ಲಿಸುತ್ತಿದ್ದಾರೆ.

ದುಬೈನ ಕನ್ನಡಿಗಾಸ್ ಫೆಡರೇಷನ್ ಸಂಚಾಲಕರಾಗಿರುವ ಹಿದಾಯತ್ ಅಡ್ಡೂರು, ಅನಿವಾಸಿ ಭಾರತೀಯ ಸಮಿತಿಗೆ ಪ್ರವೀಣ್ ಶೆಟ್ಟಿಯವರ ಹೆಸರನ್ನು ಸೂಚಿಸಿದ್ದಾರೆ. ಟ್ವಿಟ್ಟರ್ ನಲ್ಲಿ #ಪ್ರವೀಣ್‍ಶೆಟ್ಟಿಫಾರ್‍ಎನ್‍ಆರ್‍ಐ ಎಂಬ ಹ್ಯಾಶ್ ಟ್ಯಾಗ್ ಬಳಸಿ ಅನಿವಾಸಿ ಕನ್ನಡಿಗರು ಟ್ವೀಟ್ ಮಾಡುತ್ತಿದ್ದಾರೆ. ಇತ್ತ ಹಿದಾಯತ್ ಅಡ್ಡೂರ್ ಸಾಲು ಸಾಲು ಟ್ವೀಟ್ ಮೂಲಕ ವಿದೇಶದಲ್ಲಿರುವ ಕನ್ನಡಿಗರ ಸಹಾಯಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಟ್ವೀಟ್: ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕುವೆಂಪು ಬರೆದ ಸಾಲನ್ನು ನಾವು ಅನಿವಾಸಿಗಳು ಅಕ್ಷರಶಃ ಪಾಲಿಸುತ್ತಿದ್ದೇವೆ, ಆದರೆ ಈ ಅನಿವಾಸಿಗಳ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಈಡೇರಿಸುವುದೇ? ಅನಿವಾಸಿ ಭಾರತೀಯ ಸಮಿತಿಗೆ ಪ್ರವೀಣ್ ಶೆಟ್ಟಿಯವರನ್ನು ಉಪಾಧ್ಯಕ್ಷರಾಗಿ ನೇಮಿಸಿದರೆ ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಇರುವ ಅನಿವಾಸಿ ಕನ್ನಡಿಗರಿಗೆ ಉಪಕಾರಿಯಾಗಲಿದೆ, ನಮ್ಮ ಬೇಡಿಕೆಯನ್ನು ಕಡೆಗಣಿಸಬೇಡಿ.
ಜನರ ನಡುವೆ ಇದ್ದು ಜನರ ಧ್ವನಿಯಾಗುವವರು ನಮ್ಮ ಜನಪ್ರತಿನಿಧಿಯಾಗಬೇಕು ಎಂದೇ ಎಲ್ಲರೂ ನಿರೀಕ್ಷಿಸುವುದು, ಅನಿವಾಸಿ ಕನ್ನಡಿಗರ ಧ್ವನಿ, ಸಮರ್ಥ ಪ್ರತಿನಿಧಿ ಪ್ರವೀಣ್ ಶೆಟ್ಟಿ. ಸಾವಿರಾರು ಅನಿವಾಸಿ ಕನ್ನಡಿಗರಿಗೆ ಉದ್ಯೋಗ ನೀಡಿ, ನೂರಾರು ಕನ್ನಡ ಪರ ಸಂಘಟನೆಗಳಿಗೆ ತನು ಮನ ಧನದಿಂದ ಸಹಾಯಹಸ್ತ ಚಾಚಿ, ಕನ್ನಡಿಗರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಅನಿವಾಸಿ ಕನ್ನಡಿಗರ ಮನಗೆದ್ದ ಪ್ರವೀಣ್ ಶೆಟ್ಟಿ ಅನಿವಾಸಿ ಭಾರತೀಯ ಸಮಿತಿಗೆ ಸೂಕ್ತ ಆಯ್ಕೆ.
— Hidayath Addoor (@HidayathAddur) December 6, 2020
ಮುಖ್ಯಮಂತ್ರಿ ಯಡಿಯುರಪ್ಪನವರೇ, ಬಹಳಷ್ಟು ನಿರೀಕ್ಷೆಯೊಂದಿಗೆ ಅನಿವಾಸಿಗಳು ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದೇವೆ, ತಕ್ಷಣವೇ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನಾಗಿ ಪ್ರವೀಣ್ ಶೆಟ್ಟಿಯವರನ್ನು ನೇಮಿಸುವಿರೆಂಬ ಆಶಯದಲ್ಲಿದ್ದೇವೆ. ನಮ್ಮ ರಾಜ್ಯ ಸರ್ಕಾರವನ್ನು ನೆರೆಯ ಕೇರಳ ಸರ್ಕಾರದೊಂದಿಗೆ ತುಲನೆ ಮಾಡಲು ನಮಗೆ ಇಚ್ಚೆಯಿಲ್ಲ, ಆದರೂ ಅವರ ಸರ್ಕಾರ ಅನಿವಾಸಿಗಳಿಗೆ ನೀಡುವ ಮಾನ್ಯತೆ ನಮ್ಮ ಸರ್ಕಾರದ ನಿರ್ಲಕ್ಷ್ಯತೆಯನ್ನು ಎತ್ತಿ ತೋರಿಸುತ್ತೆ, ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಿ.

Leave a Reply