ಅನಾಥಾಶ್ರಮದ ದಾನಿಯಿಂದಲೇ ಅಪ್ರಾಪ್ತೆ ಮೇಲೆ ಒಂದು ವರ್ಷ ನಿರಂತರ ಅತ್ಯಾಚಾರ

– ಮತ್ತುಬರುವ ಜ್ಯೂಸ್ ನೀಡಿ ಕೃತ್ಯ
– ಅನಾಥಾಶ್ರಮದ ವಾರ್ಡನ್, ಸಹೋದರಗೆ ಹಣ ನೀಡಿ ಕೃತ್ಯ

ಹೈದರಾಬಾದ್: ಅನಾಥಾಶ್ರಮದಲ್ಲೇ 14 ವರ್ಷದ ಬಾಲಕಿ ಮೇಲೆ ಅನಾಥಾಶ್ರಮದ ದಾನಿ ಒಂದು ವರ್ಷ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.

ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅನಾಥಾಶ್ರಮದಲ್ಲಿದ್ದ ಬಾಲಕಿ ಮೇಲೆ ದಾನಿ ಸತತ ಒಂದು ವರ್ಷ ಕಾಲ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅನಾಥಾಶ್ರಮದ ಮಾಲೀಕನನ್ನು ಚೀಲುಕುರಿ ವಿಜಯ್ ಎಂದು ಗುರುತಿಸಲಾಗಿದ್ದು, ಈತ ಹಾಸ್ಟೆಲ್ ವಾರ್ಡನ್ ಸಹ ಆಗಿದ್ದಾನೆ. ಈತನ ಸಹೋದರ ಸುರಪಾನೇನಿ ಜಯದೀಪ್ ಹಾಗೂ ಅನಾಥಾಶ್ರಮದ ದಾನಿ ನರೆಡ್ಲಾ ವೇಣುಗೋಪಾಲ ರೆಡ್ಡಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯನ್ನು 2015ರಲ್ಲಿ ಆಕೆಯ ಚಿಕ್ಕಪ್ಪ ಅನಾಥಶ್ರಮಕ್ಕೆ ಸೇರಿಸಿದ್ದ. 2019ರಲ್ಲಿ ಅನಾಥಾಶ್ರಮದ ಮಾಲೀಕ ವಿಜಯ್ ಬಾಲಕಿಗೆ 5ನೇ ಮಹಡಿಯಲ್ಲಿರುವ ರೂಮ್‍ನಲ್ಲಿರುವಂತೆ ತಿಳಿಸಿದ್ದಾರೆ. ನಂತರ ವೇಣುಗೋಪಾಲ್ ಬಾಲಕಿಗೆ ಮತ್ತುಬರುವ ಜ್ಯೂಸ್ ಕುಡಿಸಿ, ಪ್ರಜ್ಞಾಹೀನಳಾಗುತ್ತಿದ್ದಂತೆ ಅತ್ಯಾಚಾರ ಎಸಗಿದ್ದಾನೆ. ಘಟನೆ ಕುರಿತು ಬಾಲಕಿ ಅನಾಥಾಶ್ರಮದ ವಾರ್ಡನ್‍ಗೆ ಮಾಹಿತಿ ನೀಡಿದ್ದು, ಈ ಕುರಿತು ಬಾಯ್ಬಿಡದಂತೆ ಆತ ಬೆದರಿಕೆ ಹಾಕಿದ್ದಾನೆ. ನಂತರ ಆರೋಪಿ ಪದೇ ಪದೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ವೇಣುಗೋಪಾಲ್ ವಾರ್ಡನ್ ವಿಜಯ್ ಹಾಗೂ ಆತನ ಸಹೋದರನಿಗೆ ಹಲವು ಬಾರಿ ಹಣ ನೀಡಿದ್ದಾನೆ. ಅಲ್ಲದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಪೈಕಿ ನಾನೊಬ್ಬಳೇ ಅಲ್ಲ, ಇನ್ನೂ ಹಲವರಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ.

ಲಾಕ್‍ಡೌನ್ ವೇಳೆ ತಮ್ಮ ಚಿಕ್ಕಪ್ಪನ ಮನೆಯಲ್ಲಿ ಇರಲು ಬಾಲಕಿ ತೆರಳಿದ್ದಾಳೆ. ಈ ವೇಳೆ ಅನಾಥಾಶ್ರಮದ ವಾರ್ಡನ್ ಎಚ್ಚರಿಸಿದ್ದು, ಕೊರೊನಾ ಪರೀಕ್ಷೆಯ ವರದಿ ತರದೆ ಮರಳಿ ಕರೆದುಕೊಳ್ಳುವುದಿಲ್ಲ ಎಂದು ಬೆದರಿಸಿದ್ದಾನೆ. ಈ ವೇಳೆ ಚಿಕ್ಕಪ್ಪ ಸಹ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಬಾಲಕಿ ಅವಳ ಚಿಕ್ಕಮ್ಮನ ಮನೆಗೆ ತೆರಳಿದ್ದು, ಚಿಕ್ಕಪ್ಪ ಹಲ್ಲೆ ಮಾಡಿದ ಗಾಯಗಳನ್ನು ತೋರಿಸಿದ್ದಾಳೆ. ಈ ವೇಳೆ ಹಲವು ಬಾರಿ ಪ್ರಶ್ನಿಸಿದಾಗ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಸಹ ಹೇಳಿಕೊಂಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಬಂಧಿಸಿದ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *