ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

– ಪಿಎಂ ಕೇರ್ಸ್‍ನಿಂದ ನೀಡಿದ ಹೊಸ ವೆಂಟಿಲೇಟರ್ ಗಳು

ಕೊಪ್ಪಳ: ಹಲವೆಡೆ ವೆಂಟಿಲೇಟರ್ ಗಳಿಲ್ಲ ಎಂದು ರೋಗಿಗಳು ನರಳುತ್ತಿದ್ದಾರೆ, ಕೆಲವರು ಸಾವನ್ನಪ್ಪುತ್ತಿದ್ದಾರೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಹೊಸ ವೆಂಟಿಲೇಟರ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ.

ಕೊಪ್ಪಳ ಜಿಲ್ಲೆಯ ಕೋವಿಡ್-19 ವಾರ್ಡ್ ಪಕ್ಕದ ಕೊಠಡಿಯಲ್ಲಿ ವೆಂಟಿಲೇಟರ್ ಅನಾಥವಾಗಿ ಬಿದ್ದಿವೆ. ಇದನ್ನು ಸೂಕ್ತ ರೀತಿಯಲ್ಲಿ ಅಳವಡಿಸಿ ರೋಗಿಗಳಿಗೆ ಸಹಾಯಕವಾಗುವಂತೆ ವ್ಯವಸ್ಥೆ ಕಲ್ಪಿಸುವ ಬದಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದೀಗ ವೆಂಟಿಲೇಟರ್ ಅನಾಥವಾಗಿ ಮೂಲೆಯಲ್ಲಿ ಬಿದ್ದಿವೆ. ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ ಇಲ್ಲದ ಕಾರಣ ಅನಾಥವಾಗಿ ಬಿದ್ದಿದ್ದು, ಸೂಕ್ತ ಸಿಬ್ಬಂದಿ ನೇಮಿಸಿ, ವೆಂಟಿಲೇಟರ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡದೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಜನ ಕೋವಿಡ್-19 ನಿಂದ  ಸಾವನ್ನಪ್ಪುತ್ತಿದ್ದಾರೆ. ಕಳೆದ ವಾರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ ಕೊರತೆಯೇ ಸಾವಿಗೆ ಕಾರಣ ಎಂಬ ಆರೋಪ ಸಹ ಕೇಳಿ ಬಂದಿದೆ. ಇಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದರೂ ಆರೋಗ್ಯ ಇಲಾಖೆ ಮಾತ್ರ ವೆಂಟಿಲೇಟರ್ ಇನ್‍ಸ್ಟಾಲ್ ಮಾಡಿ, ಕಾರ್ಯಾರಂಭಿಸಿಲ್ಲ ಇದರಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ವೆಂಟಿಲೇಟರ್ ಗಳು ಇದೀಗ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿವೆ.

ಪಿಎಂ ಕೇರ್ಸ್ ನಿಂದ ಈ ವೆಂಟಿಲೇಟರ್ ಗಳನ್ನು ನೀಡಲಾಗಿದ್ದು, ಅಗತ್ಯ ಇರುವ ಆಸ್ಪತ್ರೆಗಳಿಗೆ ಈ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟಾದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಅವುಗಳ ಕಾರ್ಯಾರಂಭದ ಬಗ್ಗೆ ಚಿಂತಿಸಿಲ್ಲ.

Comments

Leave a Reply

Your email address will not be published. Required fields are marked *