ಅಧಿಕಾರಿಗಳಿಗೆ ಸಿಎಂ ಖಡಕ್‌ ವಾರ್ನಿಂಗ್‌ – ಕೋವಿಡ್‌ ನಿಯಂತ್ರಣ ಸಭೆಯ ಇನ್‌ಸೈಡ್‌ ಸ್ಟೋರಿ

ಬೆಂಗಳೂರು: ಕೋವಿಡ್‌ 19 ನಿಯಂತ್ರಣ ಸಂಬಂಧ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಖಡಕ್‌ ಎಚ್ಚರಿಕೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ಕೇಂದ್ರ ಸರ್ಕಾರವೇ ಪ್ರಶಂಸೆ ನೀಡಿದೆ. ನಾವು ಕೈಗೊಂಡ ನಿಯಂತ್ರಣ ಕ್ರಮ ದೇಶಕ್ಕೆ ಮಾದರಿಯಾಗಿದೆ ಎಂಬ ಮೆಚ್ಚುಗೆ ಸಿಕ್ಕಿದೆ. ಹೀಗಿರುವಾಗ ಕಳೆದ ವಾರದಿಂದ ಕೊರೊನಾ ಗಣನೀಯವಾಗಿ ಯಾಕೆ ಏರಿಕೆ ಆಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವೇ ಪ್ರಶಂಸೆ ವ್ಯಕ್ತಪಡಿಸಿರುವಾಗ ನೀವು ಈಗ ನಿರ್ಲಕ್ಷ್ಯ ವಹಿಸಿದ್ರೆ ಹೇಗೆ? ಮಾಧ್ಯಮಗಳಲ್ಲಿ ಬರುವ ಪ್ರತಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಫಾಲೋ ಮಾಡಬೇಕು ಎಂದು ಸೂಚಿಸಿದರು. ಈ ವೇಳೆ ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‌ ವರದಿ ಬಗ್ಗೆ ಸಿಎಂ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣ – ಕರ್ನಾಟಕದ ಸಾಧನೆ ಬೆಸ್ಟ್

ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಿದ ಪ್ರಕರಣ ವರದಿಯಾಗ್ತಿವೆ. ಕೂಡಲೇ ಆ ಪ್ರಕರಣಗಳ ಬಗ್ಗೆ ಗಮನಹರಿಸಿ‌ ಸಮಸ್ಯೆ ಬಗೆಹರಿಸಿ. ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡಡ್‌ಗಳ‌ ಮಾನಿಟರಿಂಗ್ ಮಾಡಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಬೇಕು. ಮಾನಿಟರ್ ಮಾಡಿದ್ದನ್ನು ಅಪ್ಲಿಕೇಶನ್ ಮೂಲಕ ಡಿಸ್ಪ್ಲೇ ಮಾಡಲು‌ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.  ಇದನ್ನೂ ಓದಿ: ರಿಯಾಲಿಟಿ ಚೆಕ್‌.. ಚಿಕಿತ್ಸೆ ನೀಡುವ ಆಸ್ಪತ್ರೆಗಳಿಂದ್ಲೇ ಕೊರೊನಾ- ಸೋಂಕಿತರ ಜೊತೆ ಶಂಕಿತರು ಮಿಕ್ಸ್!

ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ರೋಗಿಗಳಿಗೆಂದೇ ನಿಗದಿತ ಬೆಡ್ ಗಳು ಇರಬೇಕು. ಆ ಬೆಡ್ ಸಂಖ್ಯೆಯನ್ನ ವರದಿ ಸಲ್ಲಿಸಿ. ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ ಸರಿ ಇಲ್ಲ ಎಂಬ ಆರೋಪಗಳು ಬರುತ್ತಿದೆ. ಊಟ ಚೆನ್ನಾಗಿ ಕೊಡಿ, ದುಡ್ದಿನ ಲೆಕ್ಕ ನೋಡಬೇಡಿ ಎಂದು ಸೂಚಿಸಿದ್ದಾರೆ.

ಏರಿಯಾಗಳಲ್ಲಿ ಸೀಲ್ ಡೌನ್ ಮಾಡುವುದು ಸ್ಥಳೀಯ ಮಟ್ಟದಲ್ಲಿಯೇ ಕ್ರಮ ಕೈಗೊಳ್ಳಿ. ಇಡೀ ವಾರ್ಡ್‌ಗಳನ್ನೇ ಲಾಕ್ ಡೌನ್ ಮಾಡುವ ಬದಲು ಆಯಾ ರಸ್ತೆಗಳನ್ನು ಸೀಲ್ ಡೌನ್ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಖಡಕ್‌ ವಾರ್ನಿಂಗ್‌ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಪೊಲೀಸ್ ಆಯುಕ್ತ ಭಾಸ್ಕರ ರಾವ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರ ನೀಡಿದ ಸಭೆಯ ಮುಖ್ಯಾಂಶಗಳು:
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಅತಿ ಹೆಚ್ಚು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಿದರೆ ಮಾತ್ರ, ಸೋಂಕು ಹರಡುವ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಶ್ರಮವಹಿಸಬೇಕೆಂದು ಆದೇಶಿಸಿದರು.

ಬೆಂಗಳೂರು ನಗರದಲ್ಲಿ ಹಾಗೂ ಇತರ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಪ್ರಕ್ರಿಯೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಕೆ.ಆರ್. ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ಸಿದ್ದಾಪುರ ವಾರ್ಡ್, ವಿವಿಪುರಂ, ಕಲಾಸಿ ಪಾಳ್ಯಗಳಲ್ಲಿ, ಪ್ರಕರಣ ವರದಿಯಾದ ಅಕ್ಕಪಕ್ಕದ ಬೀದಿಗಳು ಸೇರಿದಂತೆ ಸೀಲ್ ಡೌನ್ ಮಾಡಲು ನಿರ್ಧರಿಸಲಾಯಿತು.

ಕ್ವಾರಂಟೈನ್ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಅಗತ್ಯ ಬಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ದರ ನಿಗದಿ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು. ಅಲ್ಲದೆ ಪ್ರತಿ ವಾರ್ಡಿನಲ್ಲಿ ಫೀವರ್ ಕ್ಲಿನಿಕ್ ಸ್ಥಾಪಿಸಲು ನಿರ್ಧರಿಸಲಾಯಿತು.

ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಮತ್ತಿತರ ಸರ್ಕಾರಿ ಸಂಸ್ಥೆಗಳಲ್ಲಿ ಇರುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ತಿಳಿಸಲಾಯಿತು. ಬೆಂಗಳೂರು ನಗರದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಕೋವಿಡ್ 19 ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿದ್ದು, ಈ ಚಟುವಟಿಕೆಗಳಿಗೆ ಧಕ್ಕೆಯಾಗದಂತೆ ಕೋವಿಡ್ 19 ನಿಯಂತ್ರಿಸುವುದು ನಮ್ಮ ಕರ್ತವ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕ್ವಾರಂಟೈನ್ ಉಲ್ಲಂಘನೆ ಮತ್ತು ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸ್ವಯಂ ಸೇವಕರನ್ನೊಳಗೊಂಡ ತಂಡಗಳು ಕಾರ್ಯನಿರ್ವಹಿಸುತ್ತಿವೆ. ವಾರ್ ರೂಂ ನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತು ಕ್ಷಣ ಕ್ಷಣದ ಮಾಹಿತಿ ಲಭ್ಯವಿರಬೇಕು. ಸೋಂಕಿತರಿಗೆ ವಿಳಂಬವಿಲ್ಲದೆ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

Comments

Leave a Reply

Your email address will not be published. Required fields are marked *