ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ನಿರಾಣಿ

– ಸಬೂಬು ಹೇಳಿದರೆ ಸಹಿಸುವುದಿಲ್ಲ
– ಆಗುವುದಿಲ್ಲ ಹೋಗುವುದಿಲ್ಲ ಎಂಬ ಮಾತೇ ಬೇಡ

ಬೆಂಗಳೂರು: ಆಗುವುದಿಲ್ಲ, ಬರುವುದಿಲ್ಲ ಎಂಬ ಸಬೂಬು ಹೇಳದೆ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡದಿದ್ದರೆ, ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಸಿದರು.

ರೇಸ್‍ಕೋರ್ಸ್ ರಸ್ತೆಯ ಖನಿಜ ಭವನದ ಉದ್ಯೋಗ ಮಿತ್ರದಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಅಕಾರಿಗಳ ಜೊತೆ ಶುಕ್ರವಾರ ಔಪಚಾರಿಕ ಸಭೆ ನಡೆಸಿದ ಅವರು, ಇನ್ನು ಮುಂದೆ ನನ್ನ ಇಲಾಖೆಯಲ್ಲಿ ಆಗುವುದಿಲ್ಲ, ಬರುವುದಿಲ್ಲ ಎಂಬ ಕಾರಣಗಳನ್ನು ನೀಡಲೇಬಾರದು. ಕೆಲಸ ಮಾಡುವುದಷ್ಟೇ ನಿಮ್ಮ ಗುರಿಯಾಗಿರಬೇಕೆಂದು ತಾಕೀತು ಮಾಡಿದರು.

ಏನೋ ಒಂದು ಮಾಡಬೇಕೆಂಬ ಅಸಡ್ಡೆ ಬೇಡ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇರಬೇಕು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಯು ಅತ್ಯಂತ ಮಹತ್ವದ ಇಲಾಖೆಯಾಗಿರುವುದರಿಂದ ಇನ್ನು ಮುಂದೆ ಶಿಸ್ತುಬದ್ಧವಾಗಿ ಕೆಲಸ ಮಾಡಲೇಬೇಕೆಂದು ಸೂಚಿಸಿದರು.

ನಮ್ಮ ಉದ್ದಿಮೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ಮೊದಲ ಪ್ರಾಶಸ್ತ್ಯ ಕೊಡಬೇಕು. ನೆರೆಯ ರಾಜ್ಯಗಳಲ್ಲಿ ಅಲ್ಲಿನವರಿಗೆ ಆದ್ಯತೆ ಕೊಡುತ್ತಾರೆ. ಹೊರರಾಜ್ಯದವರಿಗೆ ಬಂಡವಾಳ ಹೂಡಿಕೆ ಮಾಡಿಕೊಂಡು ಲಾಭ ಮಾಡುವವರು ಪುನಃ ಇತ್ತ ಕಡೆ ಬರುವುದಿಲ್ಲ. ಹೀಗಾಗಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸಲಹೆ ಮಾಡಿದರು. ಇನ್ನು ಮುಂದೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ರೋಗಗ್ರಸ್ಥ ನಿಗಮಗಳನ್ನು ಗುರುತಿಸುವ ಕೆಲಸ ಮಾಡಬೇಕು. ಇವುಗಳ ಪುನಶ್ಚೇತನಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.

Comments

Leave a Reply

Your email address will not be published. Required fields are marked *