ಅಧಿಕಾರಕ್ಕೆ ಬಂದ್ರೆ ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ: ಪ್ರಿಯಾಂಕಾ ಗಾಂಧಿ ಘೋಷಣೆ

– ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಹಣ

ದಿಸ್ಪುರ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ.

ಅಸ್ಸಾಂನಲ್ಲಿ ಭರ್ಜರಿಯಾಗಿ ಚುನಾವಣೆ ಪ್ರಚಾರ ಆರಂಭಿಸಿರುವ ಪ್ರಿಯಾಂಕಾ ಗಾಂಧಿ, ಟೀ ಎಸ್ಟೇಟ್‍ಗಳಿಗೂ ಭೇಟಿ ನೀಡಿ ಅಲ್ಲಿನ ಕಾರ್ಮಿಕರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ತೇಜಪುರ್‍ದಲ್ಲಿ ಮಾತನಾಡಿ, ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಗೃಹಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ. ಅಲ್ಲದೆ ಟೀ ಗಾರ್ಡನ್‍ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ದಿನ 365 ರೂ. ನೀಡುತ್ತೇವೆ. ಅಲ್ಲದೆ 5 ಲಕ್ಷ ಹೊಸ ಸರ್ಕಾರಿ ಕೆಲಸಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿದ್ದಾರೆ.

ಈ ಎಲ್ಲ ಹೇಳಿಕೆಗಳು ಕೇವಲ ಆಶ್ವಾಸನೆಗಳಲ್ಲ, ಭರವಸೆಗಳು. ಅಲ್ಲದೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇಲ್ಲಿ ಸಿಎಎಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಜನರನ್ನು ಮನವೊಲಿಸಲು ಮುಂದಾಗಿದ್ದಾರೆ.

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಇಂದು ಬೆಳಗ್ಗೆ ಸಹ ಪ್ರಿಯಾಂಕಾ ಗಾಂಧಿ ವಾದ್ರಾ ಟೀ ಎಲೆಗಳನ್ನು ಕಿತ್ತಿದ್ದಾರೆ. ಈ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕಾ ವಾದ್ರಾ ಪ್ರಚಾರದ ಅಂಗವಾಗಿ ಆದಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ ಟೀ ಎಲೆಗಳನ್ನು ಕೊಯ್ದಿದಿದ್ದಾರೆ. ಚಹಾ ತೋಟ ಕಾರ್ಮಿಕರ ಜೀವನವು ಸತ್ಯ ಮತ್ತು ಸರಳತೆಯಿಂದ ಕೂಡಿದೆ ಮತ್ತು ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ. ಇಂದು ಅವರೊಂದಿಗೆ ಕುಳಿತುಕೊಳ್ಳುವುದು ಅವರ ಕೆಲಸ, ಕುಟುಂಬದ ಯೋಗಕ್ಷೇಮ ಮತ್ತು ಅವರ ಜೀವನದ ಕಷ್ಟಗಳನ್ನು ಅನುಭವ ತಿಳಿದುಕೊಂಡೆ. ಅವರಿಂದ ನನಗೆ ದೊರೆತ ಪ್ರೀತಿ ಮತ್ತು ಈ ಅನ್ಯೋನ್ಯತೆಯನ್ನು ನಾನು ಮರೆಯುವುದಿಲ್ಲ ಎಂದು ಬರೆದುಕೊಂಡು ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ತೋಟದಲ್ಲಿ ಮಹಿಳಾ ಕಾರ್ಮಿಕರಿಂದ ಚಹಾ ಎಲೆಗಳನ್ನು ಬಿಡಿಸಿದ್ದಾರೆ ಎಂದು ಬರೆದುಕೊಂಡು ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರೀಯಾಂಕಾ ಅವರು ಎಲೆ ಕೀಳುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಚುನಾವಣೆ ಆರಂಭವಾಗಲಿದ್ದು, ಪ್ರಿಯಾಂಕ ಗಾಂಧಿ 2 ದಿನಗಳ ಕಾಲ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಸ್ಸಾಂನ ವಿಧಾನಸಭಾ ಚುನಾವಣೆ ಮೂರು ಹಂತದಲ್ಲಿ ನಡೆಯಲಿದೆ.

Comments

Leave a Reply

Your email address will not be published. Required fields are marked *