ಅತ್ಯಾಚಾರಕ್ಕೆ ವಿರೋಧಿಸಿದ 7 ವರ್ಷದ ಬಾಲಕಿಯನ್ನು ಕೊಲೆಗೈದ ಅಂಕಲ್

– ನಾಯಿ ಕಚ್ಚಿದ ರೀತಿಯಲ್ಲಿ ಶವ ಪತ್ತೆ

ಅಹಮ್ಮದಾಬಾದ್: ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿರುವ ಆರೋಪದ ಮೇಲೆ 46 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತೆ ಶನಿವಾರ ನಾಪತ್ತೆಯಾಗಿದ್ದು, ಮಂಗಳವಾರ ರಾತ್ರಿ ಒಗ್ನಾಜ್ ಟೋಲ್ ಪ್ಲಾಜಾ ಬಳಿಯ ಹೊಲದಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ, ಮೈಮೇಲೆ ಬಟ್ಟೆ ಇಲ್ಲದೆ ಹಾಗೂ ನಾಯಿ ಕಚ್ಚಿದ ಗುರುತುಗಳೊಂದಿಗೆ ಪತ್ತೆಯಾಗಿತ್ತು.

ಬಂಧಿತ ವ್ಯಕ್ತಿಯನ್ನು ಬಿಖಾ ಮಿಸ್ತ್ರಿ ಎಂದು ಗುರುತಿಸಲಾಗಿದ್ದು, ಈತ ಮೆಹ್ಶಾನಾ ನಿವಾಸಿ. ಅಹಮ್ಮದಾಬಾದ್ ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅವಿವಾಹಿತನಾಗಿರುವ ಮಿಸ್ತ್ರಿ ಅಪ್ರಾಪ್ತೆಯ ಮನೆಯ ಪಕ್ಕದಲ್ಲೇ ಇರುವ ತನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದಾನೆ.

ಸೆಪ್ಟೆಂಬರ್ 12ರಂದು 7 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಬಾಲಕಿಯ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿತ್ತು. ಈ ಮಧ್ಯೆ ಮಂಗಳವಾರ ರಾತ್ರಿಯೇ ಬಾಲಕಿಯ ಶವ ಪತ್ತೆಯಾಗಿದೆ ಎಂದು ಅಹಮ್ಮದಾಬಾದ್ ಡಿಟೆಕ್ಷನ್ ಆಫ್ ಕ್ರೈಂ ಬ್ರಾಂಚ್(ಡಿಸಿಬಿ) ಅಧಿಕಾರಿ ತಿಳಿಸಿದ್ದಾರೆ.

ತನಿಖೆಯ ವೇಳೆ ಆರೋಪಿ ಬಾಲಕಿಯ ಚಿಕ್ಕಪ್ಪನಾಗಿದ್ದು, ಆಕೆಗೆ ಆಮಿಷವೊಡ್ಡಿ ಅಪಹರಿಸಿದ್ದಾನೆ. ಸೆಪ್ಟೆಂಬರ್ 12ರಂದು ರಾತ್ರಿ ಆಟೋರಿಕ್ಷಾದಲ್ಲಿ ಕೃಷಿಭೂಮಿಯೋಂದರ ಬಳಿ ಕರೆದೊಯ್ದಿದ್ದಾನೆ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

ಆರೋಪಿ ಪೊಲೀಸರ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೃಷಿಭೂಮಿಗೆ ಕರೆದೊಯ್ದ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ. ತನ್ನ ಕೃತ್ಯವನ್ನು ಬಾಲಕಿ ವಿರೋಧಿಸಿದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಪೊದೆಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಘಟನೆ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ (302) ಹಾಗೂ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *