ಅತ್ಯಾಚಾರಕ್ಕೆ ಒಳಗಾದ ಯುವತಿಯ ಮರಣೋತ್ತರ ವರದಿ ನೀಡಲು ವೈದ್ಯನ ನಕಾರ

– ನ್ಯಾಯಕ್ಕಾಗಿ ಸಂಬಂಧಿಕರಿಂದ ಆಗ್ರಹ

ಹಾಸನ: ಅತ್ಯಾಚಾರಕ್ಕೆ ಒಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿಯ ಮರಣೋತ್ತರ ಪರೀಕ್ಷೆ ವರದಿ ನೀಡದೇ, ಹಾಸನ ಜಿಲ್ಲಾಸ್ಪತ್ರೆ ವೈದ್ಯರು ತಮ್ಮ ವಿರೋಧಿ ಬಣದ ವಕೀಲರೊಂದಿಗೆ ಶಾಮೀಲಾಗಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಹಾಸನ ತಾಲೂಕಿನ ಅದ್ದಿಹಳ್ಳಿಯಲ್ಲಿ ಯುವತಿ ಪ್ರಿಯಾಂಕ ಆಗಸ್ಟ್ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಯುವತಿಯ ಪೋಷಕರು, ನಮ್ಮ ಗ್ರಾಮದವನೇ ಆದ ಯುವಕನೊಬ್ಬ ನಮ್ಮ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ್ದರಿಂದ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪ ಮಾಡಿದ್ದರು.

ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಆದರೆ ಆರೋಪಿ ಪರ ವಾದ ಮಾಡುತ್ತಿರುವ ವಕೀಲರ ಸಹೋದರ ವೈದ್ಯರಾಗಿದ್ದು, ಅವರೇ ಯುವತಿಯ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಂದು ವಾರ ಕಳೆದರೂ ಮರಣೋತ್ತರ ಪರೀಕ್ಷೆ ವರದಿ ನೀಡಿಲ್ಲ. ಮರಣೋತ್ತರ ಪರೀಕ್ಷೆ ಮಾಡಿದ ಎರಡು ದಿನಗಳಲ್ಲಿ ಮರಣೋತ್ತರ ವರದಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ವೈದ್ಯರು ಶಾಮೀಲಾಗಿರುವ ಅನುಮಾನ ಮೂಡಿದ್ದು, ಮರಣೋತ್ತರ ಪರೀಕ್ಷೆ ವರದಿ ನೀಡುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ಸಂಬಂಧಿಕರು ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *