ಅಣ್ಣಾರನ್ನ ಸಮರ್ಥಿಸಿಕೊಂಡಿದ್ದು ನನ್ನ ಜೀವನದ ತಪ್ಪು ನಿರ್ಧಾರ: ಬಿಟೌನ್ ನಿರ್ದೇಶಕ

ಮುಂಬೈ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯನ್ನ ಸಮರ್ಥಿಸಿಕೊಂಡಿದ್ದು ನನ್ನ ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರ ಎಂದು ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಆರಂಭಿಸೋದಾಗಿ ಹೇಳಿದ್ದರು. ಧರಣಿಗಾಗಿ ವೇದಿಕೆಯನ್ನ ಸಹ ಸಿದ್ಧಪಡಿಸಲಾಗಿತ್ತು. ಶುಕ್ರವಾರ ಸಂಜೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯ ಖಾತೆ ಸಚಿವ ಕೈಲಾಸ್ ಚೌದರಿ ಭೇಟಿ ಬಳಿಕ ಅಣ್ಣಾ ಹಜಾರೆ ಧರಣಿಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು. ಇದೀಗ ಅಣ್ಣಾ ಹಜಾರೆ ನಡೆಗೆ ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಒಳ್ಳೆಯ ಭಾವನೆ ಮತ್ತು ಸದುದ್ದೇಶದಿಂದ ಅಣ್ಣಾ ಹಜಾರೆ ಅವರನ್ನ ಸಮರ್ಥನೆ ಮಾಡಿಕೊಂಡಿದ್ದೆ. ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನ ಬೆಂಬಲಿಸಿದ್ದೇನೆ. ನನ್ನ ಸಮರ್ಥನೆಗೆ ವಿಷಾಧಿಸುತ್ತೇನೆ. ಜೀವನದಲ್ಲಿ ಎಲ್ಲರಿಂದಲೂ ತಪ್ಪುಗಳಾಗೋದು ಸಹಜ. ಸಿಮ್ರನ್ ಸಿನಿಮಾ ನನ್ನ ಹಿಂದಿನ ತಪ್ಪು ಎಂದು ಹನ್ಸಲ್ ಮೆಹ್ತಾ ಟ್ವೀಟ್ ಮಾಡಿದ್ದಾರೆ. 2017ರಲ್ಲಿ ಕಂಗನಾ ರಣಾವತ್ ಸಿಮ್ರನ್ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಸಿನಿಮಾ ಪ್ಲಾಪ್ ಆಗಿತ್ತು.

ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿದಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನಡೆಯನ್ನ ಶಿವಸೇನೆ ಪ್ರಶ್ನೆ ಮಾಡಿದೆ. ಶಿವಸೇನೆ ಮುಖವಾಣಿಯ ಸಂಪಾದಕೀಯದಲ್ಲಿ ಅಣ್ಣಾ, ನೀವು ಯಾರ ಪರ? ಶೀರ್ಷಿಕೆಯಡಿಯಲ್ಲಿ ಲೇಖನ ಪ್ರಕಟಿಸಿತ್ತು.

ರೈತರ ಆಂದೋಲನ ಕೇವಲ ರಾಜ್ಯಗಳಿಗೆ ಸೀಮಿತವಾಗಿರದೇ ದೇಶದ ವಿಷಯವಾಗಿದೆ. ಲಕ್ಷ ಲಕ್ಷ ರೈತರು ಕಳೆದ 30 ದಿನಗಳಿಂದಲೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಸರ್ಕಾರ ಈ ಶಾಂತಿಯುತ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಧರಣಿ ಸ್ಥಳದ ವಿದ್ಯುತ್-ನೀರು ಕಡಿತಗೊಳಿಸಿ ಅಮಾನವೀಯತೆಯನ್ನ ಮರೆಯುತ್ತಿದೆ. ರೈತರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿ ಒತ್ತಡಕ್ಕೆ ಸಿಲುಕಿ ಪ್ರತಿಭಟನೆಯಿಂದ ಹಿಂದೆ ಸರಿಸುವ ಎಲ್ಲ ಪ್ರಯತ್ನಗಳನ್ನ ಕೇಂದ್ರ ಸರ್ಕಾರ ತೆರೆಮರೆಯಲ್ಲಿ ಮಾಡುತ್ತಿದೆ. ಈ ವಿಷಯದ ನಿಮ್ಮ ಅಭಿಪ್ರಯಾ ಏನು? ನಿಜವಾಗಲೂ ನೀವು ಯಾರ ಪರ ಅಣ್ಣಾ ಎಂದು ಶಿವಸೇನೆ ಪ್ರಶ್ನೆ ಮಾಡಿತ್ತು.

Comments

Leave a Reply

Your email address will not be published. Required fields are marked *