ಅಜ್ಜಿ ಕೈಗೆ ಕಲ್ಲಿನ ಕವರ್ ಕೊಟ್ಟು ಚಿನ್ನದ ಸರ ಕದ್ದ ಕಳ್ಳರು

ಚಿಕ್ಕಬಳ್ಳಾಪುರ: ವೃದ್ಧೆಯ ಕೈಗೆ ಕಲ್ಲು ಕೊಟ್ಟು ಚಿನ್ನದ ಸರ ಕಳವು ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ಆಂದಹಾಗೆ ಚಿನವಂಡನಹಳ್ಳಿ ಗ್ರಾಮದ ರತ್ನಮ್ಮ(55) ಸರ ಕಳೆದುಕೊಂಡ ಮಹಿಳೆ. ದಿನಸಿ ಪದಾರ್ಥ ಹಾಗೂ ಮಟನ್ ಖರೀದಿಗೆ ಅಂತ ವಿಜಯಪುರ ಪಟ್ಟಣಕ್ಕೆ ಅಜ್ಜಿ ಬಂದಿದ್ದು, ಕೋಲಾರ ಮಾರ್ಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಮುಂದೆ ಸರಗಳ್ಳರಿದ್ದಾರೆ. ಮೈ ಮೇಲಿರೋ ಸರ ಬಿಚ್ಚಿ ಕವರ್ ನಲ್ಲಿ ಹಾಕಿಕೊಳ್ಳಿ ಅಂತ ಅಜ್ಜಿಯನ್ನ ನಂಬಿಸಿ ಸರ ಬಿಚ್ಚಿಸಿದ್ದಾರೆ. ಈ ವೇಳೆ ಅಜ್ಜಿಯನ್ನು ಯಾಮಾರಿಸಿ ಸರ ಇದ್ದ ಕವರ್‌ನನ್ನು ತಾವು ತೆಗೆದುಕೊಂಡು, ಕಲ್ಲಿಟ್ಟಿದ್ದ ಕವರ್‌ನನ್ನು ಅಜ್ಜಿಯ ಕೈಗೆ ಕೊಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಸರಿಸುಮಾರು 35 ಗ್ರಾಂ ತೂಕದ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಅಜ್ಜಿ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ರತ್ನಮ್ಮನವರು, ನನ್ನನ್ನು ಯಾಮಾರಿಸಿ ನನ್ನ ಬಳಿ ಇದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುವವಳು, ಕಷ್ಟ ಪಟ್ಟು ಸಂಪಾದನೆ ಮಾಡಿ ಸರ ಮಾಡಿಸಿಕೊಂಡಿದ್ದೆ. ಈಗ ಸರ ಕಳುವಾಗಿದೆ. ನಾನು ಏನು ಮಾಡಲಿ ಎಂದು ಕಣ್ಣೀರಿಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ರಂಗಪ್ಪ ಅಜ್ಜಿ ಜೊತೆ ಮಾತನಾಡಿ ಘಟನಾ ಸ್ಥಳ ಪರೀಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಡಿವೈಎಸ್‍ಪಿ ರಂಗಪ್ಪ, ದೊಡ್ಡಬಳ್ಳಾಪುರ ಹಾಗೂ ವಿಜಯಪುರ ವ್ಯಾಪ್ತಿಯಲ್ಲಿ ಸರ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಜಾಗೃತರಾಗಬೇಕು ಬೆಲೆ ಬಾಳುವ ಒಡವೆಗಳನ್ನು ಧರಿಸುವುದು ಮುಖ್ಯವಲ್ಲ. ಅದನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯ. ನಾನಾ ರೀತಿಯಲ್ಲಿ ಮಾರುವೇಷ ಧರಿಸಿ ಕಳ್ಳರು ತಮ್ಮ ಕೈಚಳಕಗಳನ್ನು ತೋರುತ್ತಿದ್ದಾರೆ. ಜನತೆ ಜಾಗೃತೆಯಿಂದ ಇರಬೇಕು ಮತ್ತು ಸಾರ್ವಜನಿಕರ ಸಹಕಾರ ಸಹಾಯ ಬಹಳ ಮುಖ್ಯವಾಗಿ ಬೇಕು. ಇಂತಹ ಯಾವುದೇ ಘಟನೆಗಳು ಕಂಡು ಬಂದಲ್ಲಿ ಅನುಮಾನಸ್ಪದವಾಗಿ ಯಾರಾದರೂ ಹೊಸಬರು ಓಡಾಡುವುದು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಡಿವೈಎಸ್ಪಿ ರಂಗಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ:ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

Comments

Leave a Reply

Your email address will not be published. Required fields are marked *