ಅಗತ್ಯ ವಸ್ತುಗಳ ಖರೀದಿಗೆ ನೂಕು ನುಗ್ಗಲು – ಪೊಲೀಸರೊಂದಿಗೆ ಲಾಠಿ ಹಿಡಿದು ಫೀಲ್ಡಿಗಿಳಿದ ಗ್ರಾಂ.ಪಂ ಅಧ್ಯಕ್ಷೆ

ಮಡಿಕೇರಿ: ಲಾಕ್‍ಡೌನ್ ಆರಂಭವಾಗಿ ಇಂದಿಗೆ ಆರು ದಿನವಾದರೂ ಅನಗತ್ಯ ಓಡಾಟ ವಸ್ತುಗಳ ಖರೀದಿಗೆ ಜನರು ನೂಕು ನುಗ್ಗಲು ಮುಂದುವರೆಸಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿ ಇಂದು ಜನರು ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ಅನಗತ್ಯವಾಗಿ ಓಡಾಟ ಮಾಡುತ್ತಿದ್ದರು. ದಿನಸಿ ಅಂಗಡಿಗಳಲ್ಲಿ ಹಾಗೂ ತರಕಾರಿ ಅಂಗಡಿಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ತಗೆದುಕೊಳ್ಳಲು ಮುಗಿಬೀಳುತ್ತಿದ್ದರು.

ಪೊಲೀಸರು ಜನರಿಗೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ತೆಗೆದುಕೊಳ್ಳಿ ಎಂದು ಎಷ್ಟೇ ಮನವರಿಕೆ ಮಾಡಿದರೂ ಜನ ಮಾತ್ರ ಇದಕ್ಕೆಲ್ಲ ಕೇರ್ ಮಾಡದೇ, ವಸ್ತುಗಳ ಖರೀದಿಯಲ್ಲಿ ಫುಲ್ ಬ್ಯುಸಿ ಆಗಿದ್ದರು. ಇದನ್ನ ಕಂಡ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ರೀನಾ ಅವರು ಜನರಿಗೆ ಎಷ್ಟೇ ಹೇಳಿದರೂ ಅವರಿಗೆ ಅರ್ಥ ಅಗೋಲ್ಲ ಎಂದು ನೂಕು ನುಗ್ಗಲು ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರೊಂದಿಗೆ ಲಾಠಿ ಹಿಡಿದು ಫೀಲ್ಡಿಗಿಳಿದರು.

ರೀನಾ ಅವರು ಜನರನ್ನು ಕಂಟ್ರೋಲ್ ಮಾಡಿ ಜನರನ್ನು ಸಾರತಿ ಸಾಲಿನಲ್ಲಿ ನಿಲ್ಲಿಸಿ, ಕೊರೊನಾ ಮಹಾಮಾರಿ ಬಗ್ಗೆ ಜನರೇ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಸಹಕಾರ ಮಾಡಬೇಕು ಎಂದು ಜನರಿಗೆ ಬುದ್ದಿ ಮಾತು ಹೇಳಿದರು. ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತೆರಳುವಂತೆ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *