‘ಅಕ್ಷಿ’ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ – ಸಂತಸ ವ್ಯಕ್ತಪಡಿಸಿದ ಕಾಮಿಡಿ ಕಿಲಾಡಿ ಜಿಜಿ

ಬೆಂಗಳೂರು: ಅಕ್ಷಿ ಸಿನಿಮಾಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಗೋವಿಂದೇ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಗೋವಿಂದ್ ಗೌಡ(ಜಿಜಿ) ಅಕ್ಷಿ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕನ್ನಡದ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ನಾನು ಆ ಸಿನಿಮಾದಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯಲು ಪ್ರಮುಖ ಕಾರಣ ಸಿನಿಮಾದ ನಿರ್ದೇಶಕ ಮನೋಜ್ ಕುಮಾರ್. ಹಾಗಾಗಿ ಅವರಿಗೆ ಈ ಕ್ರೆಡಿಟ್ ಸಲ್ಲಬೇಕು. ಸಿನಿಮಾ ಬಗ್ಗೆ ಹೇಳಿದಾಗ ಇಲ್ಲಿಯವರೆಗೂ ಜನರು ನನ್ನನ್ನು ಹಾಸ್ಯದ ಪಾತ್ರಗಳಲ್ಲಿ ಹೆಚ್ಚಾಗಿ ನೋಡಿದ್ದಾರೆ. ಆದರೆ ಅಕ್ಷಿ ಸಿನಿಮಾದಲ್ಲಿ ನನ್ನ ಪಾತ್ರ ಗಂಭೀರ ಪಾತ್ರವಾಗಿದ್ದು, ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಸಿನಿಮಾವನ್ನೂ ಪ್ರಾರಂಭಿಸುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ಆದರೆ ಅವರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ನೀನು ಈ ಪಾತ್ರವನ್ನು ಮಾಡಲೇಬೇಕು ಎಂದು ಹೇಳಿದ್ದರು. ನಿಜಕ್ಕೂ ಅವರ ಶ್ರಮದಿಂದ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಕೆಲವರು ಸಿನಿಮಾವನ್ನು ವೀಕ್ಷಿಸಿದ್ದು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂದರು.

ಸದ್ಯ ಸಿನಿಮಾವನ್ನು ಏಪ್ರಿಲ್‍ನಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸುತ್ತಿದ್ದು, ಮೊದಲ ಬಾರಿಗೆ ಮನೋಜ್‍ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೋವಿಂದೇ ಗೌಡ, ಇಳಾ ವಿಟ್ಲಾ, ಮಾಸ್ಟರ್ ಮಿಥುನ್, ಮಾಸ್ಟರ್ ಸೌಮ್ಯ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಕ್ಕೆ ಶ್ರೀನಿವಾಸ್, ರಮೇಶ್ ಬಂಡವಾಳ ಹೂಡಿದ್ದು, ಕಲಾ ದೇಗುಲ ಶ್ರೀನಿವಾಸ್ ಸಂಗೀತ ಸಂಯೋಜಿಸಿದ್ದಾರೆ ಹಾಗೂ ಮುಕುಲ್ ಗೌಡ ಛಾಯಾಗ್ರಹಣ ಸಿನಿಮಾಕ್ಕಿದೆ.

Comments

Leave a Reply

Your email address will not be published. Required fields are marked *