ಅಕ್ರಮ ಮರಳು ಅಡ್ಡೆ ಮೇಲೆ ದಾಳಿ – ಅಧಿಕಾರಿಗಳ ಮೇಲೆ ಕಲ್ಲು ತೂರಾಟ

– ವಾಹನದ ಗಾಜು ಪುಡಿ ಪುಡಿ

ಚಿಕ್ಕೋಡಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸುವಾಗ ಅಕ್ರಮ ದಂಧೆಕೋರರ ಗುಂಪು ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದರಿಂದ ವಾಹನದ ಗಾಜು ಪುಡಿ ಪುಡಿಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಲಭಾಂವಿ ಗ್ರಾಮದಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಹಿನ್ನೀರು ಪ್ರದೇಶದಲ್ಲಿ ಸಂಗ್ರಹವಾಗುವ ಮರಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಒಂದು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸಮೀಪದ ಮತ್ತೊಂದು ಅಡ್ಡೆಗೆ ದಾಳಿ ವೇಳೆ ಮರಳು ಸಂಗ್ರಹಿಸುತ್ತಿದ್ದ 20 ಜನರ ಗುಂಪು ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದೆ. ಬಳಿಕ ಜೀವಭಯದಿಂದ ಅಧಿಕಾರಿಗಳು ಅಲ್ಲಿಂದ ಹಿಂದಿರುಗಿದ್ದಾರೆ. ಇದನ್ನೂ ಓದಿ:ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಮೇಲಿನ ಹೆಲ್ಮೆಟ್ ನುಂಗಿದ ಆನೆ- ವೀಡಿಯೋ ವೈರಲ್

ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಜಾಮೀನು ರಹಿತ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹುಕ್ಕೇರಿ ತಹಶೀಲ್ದಾರ್ ಡಾ.ಡಿ.ಎಚ್ ಹೂಗಾರ ತಿಳಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಹಾಗೂ ಸರ್ಕಾರಿ ಆಸ್ತಿ ಹಾನಿ ಮಾಡಿದ ಹಿನ್ನೆಲೆಯಲ್ಲಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *