ಅಕ್ರಮ ಗೋವು ಸಾಗಾಟ, ಮಾರಣಾಂತಿಕವಾಗಿ ಲಾರಿಯಲ್ಲಿ ತುಂಬಿದ ಕಟುಕರು- ಇಬ್ಬರ ಬಂಧನ

– ಸಾಗಾಟದ ವೇಳೆ ಎರಡು ಗೋವುಗಳು ಸಾವು

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅಕ್ರಮವಾಗಿ ಗೋವು ಸಾಗಾಟ ಮುಂದುವರಿದಿದೆ. ಅಮಾನವೀಯವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಜೀರುಲ್ಲ ಮತ್ತು ಮೈಸೂರಿನ ರಾಘವೇಂದ್ರ ಬಂಧಿತ ಆರೋಪಿಗಳು. ಮಂಗಳೂರು ನೋಂದಣಿ ಸಂಖ್ಯೆಯ (ಕೆಎ-19 ಎ-1801) 10 ಚಕ್ರದ ಲಾರಿಯಲ್ಲಿ 18 ಗೋವುಗಳನ್ನು ಮಾರಣಾಂತಿಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು.

ಸಾಗಾಟದ ವೇಳೆ ಎರಡು ಗೋವುಗಳು ಸಾವನ್ನಪ್ಪಿದ್ದು, ಉಳಿದ 16 ಗೋವುಗಳನ್ನು ರಕ್ಷಿಸಲಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಕುಂದಾಪುರ ಡಿವೈಎಸ್‍ಪಿ ಶ್ರೀಕಾಂತ.ಕೆ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ತ್ರಾಸಿ ಮರವಂತೆಯ ಬಳಿ ಕಾರ್ಯಾಚರಣೆ ನಡೆಸಿದೆ. ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ವಾಹನ ಬಿಟ್ಟು ಓಡಿ ಹೋಗಿದ್ದಾರೆ. ಆಗ ಬೆನ್ನಟ್ಟಿ ಬಂಧಿಸಲಾಗಿದೆ. ಬಿಟ್ಟು ಹೋದ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ.

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಅಕ್ರಮ ಗೋ ಸಾಗಾಟ ವಾಹನವು ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೇರ್ಕಳಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *