ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ: ಸುಮಲತಾ

ಮಂಡ್ಯ: ಗಣಿಗಾರಿಕೆ ವಿರುದ್ಧ ದಳಪತಿ ಹಾಗೂ ಸಂಸದೆ ಸಮಲತಾ ನಡುವೆ ನಡೆಯುತ್ತಿರುವ ಜಟಾಪಟಿ ಸದ್ಯ ನಿಲ್ಲುವಂತೆ ಕಾಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ಕೆಆರ್‍ಎಸ್ ಡ್ಯಾಂ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿದ್ದ ಮಂಡ್ಯ ಸಂಸದೆ ಸುಮಲತಾ ಕೊನೆಗೂ ಗಣಿಗಾರಿಕೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಮಂಡ್ಯ ದಳಪತಿಗಳು ಸಂಸದೆ ಸುಮಲತಾ ವಿರುದ್ಧ ಅಭಿವೃದ್ದಿ ಕುಂಠಿತ ಆರೋಪ ಮಾಡಿದರೆ, ಇತ್ತ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ ಎಂದು ಗುಡುಗಿದ್ದಾರೆ.

ದಳಪತಿಗಳ ಆರೋಪಕ್ಕೆ ಸಂಸದೆ ಸುಮಲತಾ ಕಿಡಿಕಾರಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಕ್ರಮ ನಿಲ್ಲಿಸಿ, ಅಭಿವೃದ್ದಿ ತಾನಾಗಿಯೇ ಆಗುತ್ತೆ. ಸರ್ಕಾರಕ್ಕೆ ಬರಬೇಕಿದ್ದ ಕೋಟ್ಯಂತರ ರೂ. ಹಣ ಯಾರೋ ನಾಲ್ಕು ಜನರ ಜೇಬು ಸೇರುತ್ತಿದೆ ಎಂದು ದಳಪತಿಗಳಿಗೆ ಟಾಂಗ್ ನೀಡಿದರು. ಅಷ್ಟೇ ಅಲ್ಲ ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿರುವುದರಿಂದಲೇ 67 ಕೋಟಿ ರೂಪಾಯಿ ಕಾಮಗಾರಿಯನ್ನು ಮಾಡಲಾಗಿದೆ. ಬೇಕಿದ್ರೆ ಆರ್.ಟಿ.ಐ ನಲ್ಲಿ ಮಾಹಿತಿ ತೆಗೆದು ನೋಡಿ ಎಂದು ಮತ್ತೆ ಡ್ಯಾಂ ಬಿರುಕು ಬಿಟ್ಟಿತ್ತು ಎಂದು ಸಂಸದೆ ಪುನರುಚ್ಚಿಸಿದ್ದಾರೆ.

ಮಂಡ್ಯದ ಜೀವನಾಡಿ ಕೆ.ಆರ್.ಎಸ್ ಡ್ಯಾಂ ಬಿರುಕು ಬಿಟ್ಟಿದ್ದು, ಡ್ಯಾಂ ಸುತ್ತ ನಡೆಯುತ್ತಿರುವ ಗಣಿಗಾರಿಕೆಯೇ ಇದಕ್ಕೆ ಕಾರಣ ಎಂದು ಮಂಡ್ಯ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ಈ ಹಿಂದೆ ತಿರುಗಿ ಬಿದ್ದಿದ್ದರು. ಬಳಿಕ ಗಣಿಗಾರಿಕೆ ಸ್ಥಳಕ್ಕೆ ಖುದ್ದು ತೆರಳಿದ್ದ ಸಂಸದೆ ಸುಮಲತಾ ಗಣಿಗಾರಿಕೆಯ ಪ್ರಮಾಣವನ್ನು ಜನರ ಮುಂದಿಟ್ಟಿದ್ದರು. ಕೆಆರ್‍ಎಸ್ ಸುತ್ತ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೇ ಗಣಿಗಾರಿಕೆ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳಿರುವುದನ್ನು ಬಾಂಬ್ ನಿಸ್ಕ್ರೀಯ ತಂಡ ಪತ್ತೆ ಹಚ್ಚಿತ್ತು. ಇದೀಗ ಮತ್ತೆ ದಳಪತಿಗಳು ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸುತ್ತಿದ್ದು, ಜಿಲ್ಲೆಯಲ್ಲಿ ಅಭಿವೃದ್ದಿ ಕುಂಠಿತವಾಗುತ್ತಿದೆ. ಜಿಲ್ಲೆಯ ಜನರು ದುಪ್ಪಟ್ಟು ನೀಡಿ ಕಟ್ಟಡ ಕೆಲಸದ ಮೆಟಿರೀಯಲ್ ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆಗಳನ್ನು ಸಕ್ರಮ ಮಾಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *