ಅಕ್ರಮ ಆಸ್ತಿ ಗಳಿಕೆ- ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕನಿಗೆ ಜೈಲು ಶಿಕ್ಷೆ

ಮಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಗಕ್ಕೆ ಸಂಬಂಧಿಸಿದಂತೆ ಪೊಲೀಸ್ ವೃತ್ತ ನಿರೀಕ್ಷಕ ಗಂಗಿ ರೆಡ್ಡಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಆಗಸ್ಟ್ 27, 2009ರಂದು ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಗಂಗಿ ರೆಡ್ಡಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಆದೇಶ ಹೊರಡಿಸಿದ್ದು, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಅಪರಾಧಿಗೆ 4 ವರ್ಷ ಸಾದಾ ಸಜೆ ಮತ್ತು ಐದು ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ವಿಧಿಸಿದೆ. ಅಪರಾಧಿ ಗಂಗಿ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

ನ್ಯಾಯಾಧೀಶರು 111 ಪುಟಗಳ ಸುದೀರ್ಘ ಆದೇಶ ಹೊರಡಿಸಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 13(1)(ಇ) ಅಡಿ ಆರೋಪಿ ಗಂಗಿ ರೆಡ್ಡಿ ಅಪರಾಧ ಎಸಗಿದ್ದಾರೆಂದು ಸಾಬೀತಾಗಿದೆ. ಈ ಹಿನ್ನೆಲೆ ಶಿಕ್ಷೆ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

2009ರ ಆಗಸ್ಟ್ 27 ರಂದು ಬೆಳ್ತಂಗಡಿಯಲ್ಲಿ ಪೋಲಿಸ್ ವೃತ್ತ ನಿರೀಕ್ಷಕರಾಗಿದ್ದ ಗಂಗೀರೆಡ್ಡಿ ಅಕ್ರಮ ಆಸ್ತಿಗಳಿಕೆಯ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿದ್ದು, ಅದೇ ದಿನವಾದ ಇಂದು ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗೆ 4 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಆರೋಪಿ ಗಂಗೀರೆಡ್ಡಿ ತಮ್ಮ ಸೇವಾ ಅವಧಿಯಲ್ಲಿ ಆದಾಯ ಮೀರಿ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಡಿ.ವೈ.ಎಸ್.ಪಿ.ಸದಾನಂದ ವರ್ಣೇಕರ್ ಮತ್ತು ಅವರ ತಂಡ ಪ್ರಕರಣ ದಾಖಲಿಸಿ, ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ಸುಮಾರು 19 ಲಕ್ಷ ರೂ.ಗಳಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿವೈಎಸ್‍ಪಿ ಆಗಿದ್ದ ಎಮ್.ವಿಠ್ಠಲ್ ದಾಸ್ ಪೈ ಆರೋಪಿ ಗಂಗಿ ರೆಡ್ಡಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಅಭಿಯೋಜನೆಯ ಪರವಾಗಿ 22 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರ್ಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.

Comments

Leave a Reply

Your email address will not be published. Required fields are marked *