ಅಕ್ಟೋಬರ್‌ನಲ್ಲಿ ಥಿಯೇಟರ್ ಓಪನ್ ಆಗುತ್ತಾ? ಕುತೂಹಲ ಮೂಡಿಸಿದ ಅನ್‍ಲಾಕ್-5

ನವದೆಹಲಿ: ಕೊರೊನಾ ವಿಜೃಂಭಣೆ ನಡುವೆಯೂ ಹಳಿ ತಪ್ಪಿರುವ ಆರ್ಥಿಕ ಸ್ಥಿತಿ ಸರಿ ದಾರಿಗೆ ತರಲು ಕೇಂದ್ರ ಸರ್ಕಾರ, ಅನ್‍ಲಾಕ್ ರೂಪದಲ್ಲಿ ಪ್ರತಿ ತಿಂಗಳು ಶ್ರಮಿಸುತ್ತಿದೆ. ಈಗಾಗಲೇ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಅಕ್ಟೋಬರ್ 1ರಿಂದ ಅನ್‍ಲಾಕ್-05 ಜಾರಿ ಆಗಲಿದೆ.

ಅನ್‍ಲಾಕ್-5 ಜಾರಿ ಸಂಬಂಧ ಕೇಂದ್ರ ಗೃಹ ಮಂತ್ರಾಲಯ ಮಾರ್ಗಸೂಚಿ ಪ್ರಕಟಿಸಲಿದೆ. ಸಿನಿಮಾ ಹಾಲ್, ಈಜುಕೊಳ, ಎಂಟರ್ ಟೈನ್ಮೆಂಟ್ ಪಾರ್ಕ್, ಪ್ರಾಥಮಿಕ ಶಾಲೆ ತೆರೆಯಲು ಅನುಮತಿ ನೀಡುತ್ತಾ? ಅಥವಾ ದಸರಾ-ದೀಪಾವಳಿ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳಲ್ಲಿ ಯಾವ ರೀತಿ ಇರಬೇಕು ಎಂಬ ಅಂಶಗಳು ಇರಲಿವೆಯಾ ಎಂಬ ಕುತೂಹಲ ಮನೆ ಮಾಡಿದೆ.

ಮೊನ್ನೆಯಷ್ಟೇ ಕರ್ನಾಟಕ ಸೇರಿ ಅತೀ ಹೆಚ್ಚು ಸೋಂಕಿರುವ 7 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಈ ವೇಳೆ ಕಂಟೈನ್ಮೆಂಟ್ ಝೋನ್‍ಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳನ್ನಾಗಿಸುವಂತೆ, ಅಗತ್ಯ ಬಿದ್ದರೆ ಲೋಕಲ್ ಲಾಕ್‍ಡೌನ್‍ಗೆ ಮೋದಿ ಸೂಚನೆ ನೀಡಿದ್ದರು.

ಇತ್ತ ದೇಶದಲ್ಲಿ ಕೊರೊನಾ ತಾಂಡವ ಮುಂದುವರಿದಿದ್ದು, ದೇಶದಲ್ಲಿ ಒಟ್ಟು ಬಾಧಿತರ ಸಂಖ್ಯೆ 61 ಲಕ್ಷ ದಾಟಿದೆ. 1,039 ಮಂದಿ ನಿನ್ನೆ ಸೋಂಕಿಗೆ ಬಲಿ ಆಗಿದ್ದು, ಒಟ್ಟು ಸಾವುಗಳ ಸಂಖ್ಯೆ 96 ಸಾವಿರ ದಾಟಿದೆ. ಕೇವಲ 12 ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ನಮೂದಾಗಿವೆ.

ಕೇರಳದಲ್ಲಿ ಸೆಕೆಂಡ್ ರೌಂಡ್ ಕೊರೊನಾ ದಾಳಿ ಶುರುವಾಗಿದ್ದು, ನಿನ್ನೆ ಒಂದೇ ದಿನ 7 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಜನರು ನಿಯಮಗಳನ್ನು ಪಾಲನೆ ಮಾಡದಿದ್ದರೇ ಮತ್ತೆ ಲಾಕ್‍ಡೌನ್ ಜಾರಿ ಮಾಡುವುದಾಗಿ ಕೇರಳ ಸರ್ಕಾರ ಎಚ್ಚರಿಕೆ ನೀಡಿದೆ. ಇದರ ನಡುವೆಯೇ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲೂ ಹೊಸ ದಾಖಲೆ ನಿರ್ಮಾಣವಾಗಿದ್ದು, ಇದುವರೆಗೂ 50 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *