ಅಕ್ಕನನ್ನು ಚುಡಾಯಿಸಿದ್ದಕ್ಕೆ ವ್ಯಕ್ತಿಯ ತಲೆಯನ್ನು ಜಜ್ಜಿ ಕೊಲೆ ಮಾಡಿದ ತಮ್ಮ

ತುಮಕೂರು: ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಹಾಡಹಗಲೇ ತಮ್ಮನೊಬ್ಬ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ ನಡೆದಿದೆ.

ದಾದಾಪೀರ್ (55) ಕೊಲೆಯಾಗಿದ್ದು, ಮಧುಕುಮಾರ್ ಕೊಲೆಗೈದ ಆರೋಪಿ. ಆರೋಪಿ ಮಧುಕುಮಾರ್ ಅಕ್ಕ ಲಕ್ಷ್ಮಿ ನಗರದ ಚರ್ಚ್ ವೃತ್ತದ ಬಳಿ ಕ್ಯಾಂಟೀನ್ ನಡೆಸುತ್ತಿದ್ದು, ಇಂದು ಮಧ್ಯಾಹ್ನ ಅಲ್ಲಿಗೆ ಬಂದ ದಾದಾಪೀರ್ ಬಿಸ್ಕೆಟ್ ಪ್ಯಾಕೇಟ್ ಹೇಳಿದ್ದಾನೆ. ಲಕ್ಷ್ಮಿಯವರು ಹಣ ಕೇಳಿದ್ದಾರೆ. ನಾನೇನು ದುಡ್ಡು ಪ್ರಿಂಟ್ ಮಾಡುತ್ತೇನಾ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ದಾದಾಪೀರ್ ಲಕ್ಷ್ಮಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ಅಲ್ಲೇ ಕುಳಿತು ಟೀ ಕುಡಿಯುತ್ತಿದ್ದ ತಮ್ಮ ಮಧು ದಾದಾಪೀರ್ ಗೆ ಸರಿಯಾಗಿ ಮಾತನಾಡುವಂತೆ ಹೇಳಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಡಿದ್ದಾರೆ. ಆಗ ಸ್ಥಳೀಯರು ಆ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಮೃತ ದಾದಾಪೀರ್ ಮಧುವನ್ನು ಹಿಂಬಾಲಿಸಿಕೊಂಡು ಬಂದು ಜಾಮಿಯಾ ಮಸೀದಿಯ ಬಳಿ ಅಡ್ಡಗಟ್ಟಿ ಜಗಳ ತೆಗೆದಿದ್ದಾನೆ.

ಅಲ್ಲು ಕೂಡ ದಾದಾಪೀರ್ ಮಧುಗೆ ಆವಾಜ್ ಹಾಕಿದ್ದಾನೆ. ಮಾತ್ರವಲ್ಲದೆ ಮಧುಕುಮಾರ್ ಕೆನ್ನೆಗೆ ಬಾಸುಂಡೆ ಬರುವ ಹಾಗೆ ಹೊಡೆದು, ಏನು ಹೊಡೆಯುತ್ತೀಯ ಎಂದು ಗಲಾಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮಧು ಅಲ್ಲೇ ಇದ್ದ ಕಲ್ಲಿನಿಂದ ದಾದಾಪೀರ್ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *