ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

ತಿರುನಂತಪುರಂ: ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನಿಂದಾಗಿ ಮಗುವನ್ನು ಕಳೆದುಕೊಂಡಿದ್ದ ಮಹಿಳೆ ಈಗ ಕೇರಳ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಜ್ಯೋತ್ಸ್ನಾ ಜೋಸ್‌ 2018ರ ಫೆಬ್ರವರಿಯಲ್ಲಿ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದರು. ಈ ಸಮಯದಲ್ಲಿ ಗಲಾಟೆ ಪ್ರಕರಣದಲ್ಲಿ ಸಿಪಿಎಂ ಮುಖಂಡ ಥಾಂಬೆ ಹೊಟ್ಟೆಯ ಮೇಲೆ ಒದ್ದಿದ್ದ. ಈತನ ಕೃತ್ಯದಿಂದ ಜ್ಯೋತ್ಸ್ನಾ ಅವರಿಗೆ ಗರ್ಭಪಾತವಾಗಿತ್ತು. ಈಗ ಇವರು ಕಲ್ಲಿಕೋಟೆಯ ಬಾಲುಸ್ಸೆರಿ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರು, ಸಿಪಿಎಂ ಆಡಳಿತಕ್ಕೆ ಕೊನೆ ಹಾಡಲು ಜ್ಯೋತ್ಸ್ನಾ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

 

ಅಂದು ಏನಾಗಿತ್ತು?
ಜ್ಯೋತ್ಸ್ನಾ ಜೋಸ್‌ ಪತಿ ಮತ್ತು ಪಕ್ಕದ ಮನೆಯ ಪುರುಷನೋರ್ವನ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಆಗ ಇನ್ನಿಬ್ಬರು ಪುರುಷರು ಅಲ್ಲಿಗೆ ಬಂದು ಹಲ್ಲೆ ನಡೆಸಿದ್ದರು. ಈ ವೇಳೆ ತಡೆಯಲು ಬಂದ ಜ್ಯೋತ್ಸ್ನಾ ಮೇಲೆ ಪುರುಷರಲ್ಲಿ ಒಬ್ಬನಾದ ಸ್ಥಳೀಯ ಸಿಪಿಎಂ ನಾಯಕ ಥಾಂಬೆ ಹೊಟ್ಟೆಗೆ ಒದ್ದಿದ್ದ.

ಪರಿಣಾಮ ಜ್ಯೋತ್ಸ್ನಾಗೆ ಸ್ಥಳದಲ್ಲೇ ರಕ್ತಸ್ರಾವ ಆರಂಭವಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜ್ಯೋತ್ಸ್ನಾ ಅವರ ಆರೋಗ್ಯ ಗಂಭೀರವಾಗಿದ್ದ ಕಾರಣ ವೈದ್ಯರು ಅನಿವಾರ್ಯವಾಗಿ ಗರ್ಭಪಾತ ಮಾಡಿದ್ದರು.

ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಜ್ಯೋತ್ಸ್ನಾ ಕುಟುಂಬದವರು ಅಂದು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *