ಅಂಗಡಿಯವರ ನಿಸ್ವಾರ್ಥ ಸೇವೆ ನೆನೆದು ಗಣ್ಯರ ಕಂಬನಿ

-ಸೋದರ ನಮ್ಮೊಂದಿಗಿಲ್ಲ ಎಂದ ಗೋಯಲ್

ಬೆಂಗಳೂರು: ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನಕ್ಕೆ ಬಿಜೆಪಿ ನಾಯಕರು ಅಲ್ಲದೇ ಇಡೀ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಸೌಮ್ಯ ಸ್ವಭಾವದ, ನಿಸ್ವಾರ್ಥ ಜೀವಿ ಎಂದೇ ಸಂಪುಟದಲ್ಲಿ ಸುರೇಶ್ ಅಂಗಡಿ ಗುರುತಿಸಿಕೊಂಡಿದ್ದರು. ಕೊರೊನಾಗೆ ತುತ್ತಾದ ಏಳು ದಿನಗಳಲ್ಲಿಯೇ ಸುರೇಶ್ ಅಂಗಡಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಸಂತಾಪ ಸೂಚಿಸಿದ್ದು, ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿಸ್ವಾರ್ಥ ಸೇವೆಯನ್ನ ರಾಷ್ಟ್ರ ಮತ್ತು ಪಕ್ಷ ಎಂದು ಮರೆಯಲ್ಲ. ಅಂಗಡಿಯವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸುರೇಶ್ ಅಂಗಡಿಯವರ ಕುಟುಂಬಸ್ಥರು ಸಹ ದೆಹಲಿಯಲ್ಲಿದ್ದು, ಪಾರ್ಥಿವ ಶರೀರವನ್ನ ಬೆಳಗಾವಿಗೆ ತೆರಲು ಚಿಂತನೆ ನಡೆಸಲಾಗುತ್ತಿದೆ. ದೆಹಲಿಯ ಏಮ್ಸ್ ಆಸ್ಪತ್ರೆಗೆ ರಾಜ್ಯ ಸಂಸದರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಜೆ.ಪಿ.ನಡ್ಡಾ, ಇಂದು ನಮ್ಮ ಸಹೋದ್ಯೋಗಿಯನ್ನ ಕಳೆದುಕೊಂಡಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಅಂಗಡಿಯನ್ನ ನಮ್ಮನ್ನು ಅಗಲಿದ್ದು, ಜನಸೇವೆಗಾಗಿ ತಮ್ಮ ಜೀವನವನ್ನ ಮುಡಿಪು ಇಟ್ಟಿದ್ದರು. ಪಕ್ಷದ ಬೆಳವಣಿಗೆಯಲ್ಲಿಯೂ ಅಂಗಡಿಯವರ ಪಾತ್ರ ಮುಖ್ಯವಾಗಿತ್ತು ಎಂದು ಹೇಳಿದರು.

ಇನ್ನು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ಅಂಗಡಿಯವರ ಜೊತೆ ಗುಲಾಬಿ ಹೂ ಹಿಡಿದು ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಅಂಗಡಿಯವರ ಸಾವಿನ ಸುದ್ದಿ ಆಘಾತವನ್ನುಂಟು ಮಾಡಿದೆ. ಓರ್ವ ಸೋದರನಂತಿದ್ದ ಅಂಗಡಿಯವರ ಬದ್ಧತೆ ಮತ್ತು ಸಮರ್ಪಣೆ ಬಗ್ಗೆ ಹೇಳಲು ಪದಗಳು ಸಾಲದು. ಅಂಗಡಿಯವರ ಕುಟುಂಬ ಅಪ್ತ ವಲಯಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಸೆಪ್ಟೆಂಬರ್ 11ರಂದು ಅಧಿವೇಶನ ಹಿನ್ನೆಲೆ ಸುರೇಶ್ ಅಂಗಡಿಯವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢಪಟ್ಟಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಹಿನ್ನೆಲೆ ಅಂಗಡಿಯವರನ್ನ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಯದೇ ಸುರೇಶ್ ಅಂಗಡಿಯವರು ವಿಧಿವಶರಾಗಿದ್ದಾರೆ.

Comments

Leave a Reply

Your email address will not be published. Required fields are marked *